ಉತ್ತಮ ಸಮಾಜಕ್ಕಾಗಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೆಲಸ ಆರಂಭಿಸಿದ ಟಿವಿ9 ಕನ್ನಡಕ್ಕೆ ಈಗ ಸಾರ್ಥಕ 15ರ ಸಂಭ್ರಮ. ಈ ಹದಿನೈದು ವರ್ಷಗಳಲ್ಲಿ ಕರ್ನಾಟಕದ ಮನೆ ಮನಗಳನ್ನು ಗೆದ್ದು ಎಲ್ಲರ ಹೃದಯದಲ್ಲಿ ಸ್ಥಾನ ಪಡೆದ ಟಿವಿ9 ಎಲೆಮರೆಯ ಕಾಯಿಯಂತಿರುವ ಅಸಾಮಾನ್ಯ ಸಾಧಕರನ್ನು ಹೊರ ಜಗತ್ತಿಗೆ ಪರಿಚಯಿಸುತ್ತ ಬಂದಿದೆ.
ಇದಕ್ಕೆ ಸಾಕ್ಷಿಯೇ ನವನಕ್ಷತ್ರ ಸನ್ಮಾನ ಕಾರ್ಯಕ್ರಮ. ಪ್ರತಿ ವರ್ಷದಂತೆ, ಈ ಬಾರಿ ಕೂಡ ಸಮಾಜದ ಒಂಬತ್ತು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ, ಟಿವಿ9 ಅವರನ್ನು ಸನ್ಮಾನಿಸಿದೆ. ಆಯ್ದ ಕ್ಷೇತ್ರದ ಒಂಭತ್ತು ಸಾಧಕರನ್ನು ಗೌರವಿಸುವುದರ ಜೊತೆಗೆ ಒಬ್ಬರಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ ಗೌರವಿಸುವುದು ನವನಕ್ಷತ್ರ ಸನ್ಮಾನ ಕಾರ್ಯಕ್ರಮದ ಮುಖ್ಯ ಉದ್ದೇಶ.
ನಟನೆಯ ಮೂಲಕ ಯಾನವನ್ನು ಪ್ರಾರಂಭಿಸಿ ಸಮಾಜದ ಎಲ್ಲ ಸ್ತರದ ಜನರಿಗೆ ಸಹಾಯ ಮಾಡುತ್ತ, ಕೊಡುಗೈ ದಾನಿಯಾಗಿ ಬೆಳೆದ ಪುನೀತ್ ರಾಜ್ಕುಮಾರ್ ಇಂದು ನಮ್ಮ ನಡುವೆ ಇಲ್ಲ. ಅಚಾನಕ್ ಆಗಿ ತಮ್ಮ ಪಯಣವನ್ನು ನಿಲ್ಲಿಸಿ ನಡೆದ ಪುನೀತ್ ಅವರ ಸಿನಿ ಪಯಣ ಮತ್ತು ಜೀವಯಾನ ಲಕ್ಷಾಂತರ ಜನರಿಗೆ ಇವತ್ತು ಮಾದರಿಯಾಗಿದೆ. ಪುನೀತ್ ಅವರ ಪಾಸಿಟಿವ್ ಇನ್ಫ್ಲ್ಯೂಯೆನ್ಸ್ ಎಷ್ಟಿದೆ ಎಂದರೆ ಸಾವಿರಾರು ಜನ ನೇತ್ರದಾನಕ್ಕೆ ಮುಂದಾಗಿದ್ದಾರೆ.
ಇಂತಹ ಅದೆಷ್ಟೋ ಬೆಳವಣಿಗೆಗಳನ್ನು ನಾವು ಹೇಳಬಹುದು. ತಮ್ಮ ನಟನೆಗಾಗಿ ಹಲವಾರು ಪ್ರಶಸ್ತಿ ಗೆದ್ದಿರುವ ಪುನೀತ್ ಅವರಿಗೆ, ಕರ್ನಾಟಕ ಸರ್ಕಾರ ನೀಡುವ ಸರ್ವೋನ್ನತ ನಾಗರಿಕ ಪ್ರಶಸ್ತಿ, ‘ಕರ್ನಾಟಕ ರತ್ನ’ ವನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಟಿವಿ9 ನೀಡುತ್ತ ಬಂದಿರುವ ‘ಜೀವಮಾನದ ಸಾಧನೆ’ ಸನ್ಮಾನಕ್ಕೆ ಈಗ ಪುನೀತ್ ರಾಜ್ಕುಮಾರ್ ಪಾತ್ರರಾಗಿದ್ದಾರೆ.
2016 ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ಹಿಂದಿರುಗಿ ನೋಡಲೇ ಇಲ್ಲ. ‘ಅಂಜನಿಪುತ್ರ’, ‘ಚಮಕ್’, ‘ಪೊಗರು’ ಚಿತ್ರಗಳಲ್ಲಿ ಮಿಂಚಿದ್ರು. 2018ರಲ್ಲಿ ಚಲೋ ಸಿನಿಮಾ ಮೂಲಕ ಟಾಲಿವುಡ್ಗೂ ಕಾಲಿಟ್ರು. ತೆಲುಗಿನ ‘ಗೀತಾ ಗೋವಿಂದಂ’ ಕನ್ನಡತಿಗೆ ದೊಡ್ಡ ಹೆಸರು ತಂದುಕೊಡ್ತು. ರಶ್ಮಿಕಾ, ತೆಲುಗಿನ ‘ಸರಿಲೇರು ನೀಕೆವರು’, ‘ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ನಟಿಸಿದ್ದಾರೆ. ತಮಿಳಿನ ಸುಲ್ತಾನ್ ಸಿನಿಮಾದಲ್ಲೂ ಮಿಂಚಿದ್ದಾರೆ. ರಶ್ಮಿಕಾ ನಟನೆಯ ಬಹುಭಾಷಾ ಚಿತ್ರ ‘ಪುಷ್ಪ’ ಬಿಡುಗಡೆಯಾಗಿದೆ. ಬಾಲಿವುಡ್ಗೂ ಹಾರಿರುವ ಈ ಚೆಲುವೆ, ಅಮಿತಾಬ್ ಬಚ್ಚನ್ ಜೊತೆಗೆ ‘ಗುಡ್ ಬೈ’ ಚಿತ್ರದಲ್ಲಿ, ಸಿದ್ಧಾರ್ಥ ಮಲ್ಹೋತ್ರಾ ಜೊತೆಗೆ ‘ಮಿಷನ್ ಮಜ್ನು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಡೀ ದೇಶದಲ್ಲಿ ಸೆನ್ಷೇಷನಲ್ ನಟಿಯಾಗಿ ಬೆಳೆಯುತ್ತಿದ್ದಾರೆ.
ಸಂಜಿತ್ ಹೆಗ್ಡೆ ಇಡೀ ದಕ್ಷಿಣ ಭಾರತಕ್ಕೆ ತನ್ನ ಹಾಡಿನ ಗುಂಗು ಹಿಡಿಸಿದ ಯುವಗಾಯಕ. ಕನ್ನಡಿಗರ ಮನಸಂತೂ ಮರಳಿ ಮರಳಿ ಈ ಹುಡುಗನ ಹಾಡುಗಳನ್ನೇ ಕೇಳ್ತಿದೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತದಲ್ಲಿ ಸೆನ್ಷೇಷನಲ್ ಸಿಂಗರ್ ಆಗಿದ್ದಾರೆ ಸಂಜಿತ್ ಹೆಗಡೆ
ಕರ್ನಾಟಕ ಹಾಗೂ ದೇಶದ ಇತರ ಭಾಗಗಗಳಲ್ಲಿ 142 ಬ್ರಿಡ್ಜ್ಗಳನ್ನು ನಿರ್ಮಿಸಿ ನೂರಾರು ಕುಗ್ರಾಮಗಳ ಜನರಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡಿದ್ದಾರೆ. ಬ್ರಿಡ್ಜ್ಮ್ಯಾನ್ ಎಂದೇ ಖ್ಯಾತಿಪಡೆದಿರುವ ಗಿರೀಶ್ ಭಾರದ್ವಾಜ್ ಅವರಿಗೆ ಶ್ರೇಷ್ಠ ಪದ್ಮಶ್ರೀ ಪ್ರಶಸ್ತಿ ಕೂಡಾ ಒಲಿದಿದೆ.
ಇವರು ಹೆಸರಾಂತ ಆಹಾರ ವಿಜ್ಞಾನಿ. ಅಮೆರಿಕದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಇತ್ತು. ಆದ್ರೆ ಅಲ್ಲಿನ ಆಹಾರ ಪದ್ಧತಿ ಬಗ್ಗೆ ಕಸಿವಿಸಿ. ಅಮೆರಿಕದಲ್ಲಿ ಕೇವಲ 6 ವರ್ಷದ ಬಾಲಕಿ ಋತುಮತಿಯಾಗ್ತಾಳೆ. ಅದನ್ನು ನೋಡಿದ ಅವರಿಗೆ ಅನೇಕ ಪ್ರಶ್ನೆಗಳು ಕಾಡಿದವು. ಈ ಅಸ್ವಾಭಾವಿಕ ಬೆಳವಣಿಗೆಗೆ ಕಾರಣವೇನು ಅಂತಾ ವಿಜ್ಞಾನಿ, ಡಾ. ವಲಿ ಸಂಶೋಧನೆಗೆ ಇಳಿದಾಗ ಸತ್ವರಹಿತ ಆಹಾರವೇ ಇದಕ್ಕೆ ಕಾರಣ ಎನ್ನುವ ಉತ್ತರ ತಿಳಿಯಿತು. ಹಾಗಾದ್ರೆ, ಉತ್ತಮ ಆಹಾರ ಯಾವುದು ಅಂತಾ ಡಾ. ವಲಿ ಆರಂಭಿಸಿದ ಸಂಶೋಧನೆಯ ಫಲವೇ ಇಂದು ಕರ್ನಾಟಕದಲ್ಲಿ ಸಿರಿಧಾನ್ಯಗಳನ್ನ ಪುನರುಜ್ಜೀವನಗೊಳಿಸುತ್ತಿರುವ ಅವರ ಹೋರಾಟ. ಈ ವಿಜ್ಞಾನಿಯೇ ‘ಮಿಲೆಟ್ ಮ್ಯಾನ್ ಆಫ್ ಇಂಡಿಯಾ’ ಡಾಕ್ಟರ್ ಖಾದರ್ ವಲಿ.
2008ರಲ್ಲಿ ಜಾಗತಿಕ ಆರ್ಥಿಕತೆ ಕುಸಿದ್ರೂ ಬೆಂಗಳೂರಿನ ಈ ಯುವಕನ ಹಣ ಸುರಕ್ಷಿತವಾಗಿತ್ತು. ಆಗ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಕಬ್ಬಿಣದ ಕಡಲೆಯಂತಾಗಿತ್ತು. ಷೇರು ಬ್ರೋಕರೇಜ್ ಶುಲ್ಕ ದುಬಾರಿಯಾಗಿದ್ದವು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಯೋಚಿಸಿದ ಈ ಯುವಕ, 2010 ರಲ್ಲಿ ತನ್ನದೇ ಷೇರು ಬ್ರೋಕರೇಜ್ ಕಂಪನಿ ಆರಂಭಿಸಿದ. ಅತ್ಯಂತ ಕಡಿಮೆ ಶುಲ್ಕ ಪಡೆಯುವ ಮತ್ತು ಸರಳವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವ ಕಂಪನಿ ಬೆಂಗಳೂರಿನಲ್ಲಿ ತಲೆ ಎತ್ತಿತು. ಆ ಕಂಪನಿಯೇ ಝೀರೋಧ. ಝೀರೋ ಅಂದ್ರೆ ಸೊನ್ನೆ, ರೋಧ ಅಂದ್ರೆ ಅಡೆತಡೆ. ಅಂದ್ರೆ, ಷೇರು ವ್ಯಾಪಾರದಲ್ಲಿನ ಅಡೆತಡೆಯನ್ನು ಸೊನ್ನೆಯಾಗಿಸುವ ಕಂಪನಿ ಅಂತ ಅರ್ಥ. ಈ ಕಂಪನಿಯ ಸ್ಥಾಪಕನೇ ಅಪ್ಪಟ ಕನ್ನಡಿಗ ನಿತಿನ್ ಕಾಮತ್. 1979ರಲ್ಲಿ ಶಿವಮೊಗ್ಗದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದ ಸೆಲ್ಫ್ ಮೇಡ್ ಬಿಲಿಯನೇರ್ ನಿತಿನ್ ಕಾಮತ್.
2013ರ ನವೆಂಬರ್ 5ರಂದು ಶ್ರೀಹರಿಕೋಟದಿಂದ PSLV ಮೂಲಕ ಗಗನಕ್ಕೆ ನೆಗೆದ ಈ ಉಪಗ್ರಹ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿತ್ತು. ಸುದೀರ್ಘ ಪಯಣದ ನಂತರ 2014ರ ಸೆಪ್ಟೆಂಬರ್ 14ರಿಂದ ಇಸ್ರೋ ಕಳಿಸಿದ ಆ ಉಪಗ್ರಹ ಮಂಗಳ ಗ್ರಹದ ಪ್ರದಕ್ಷಿಣೆ ಆರಂಭಿಸಿತ್ತು. ಈ ಯಾನವೇ ಮಂಗಲ್ಯಾನ. ಈ ಮೂಲಕ ಭಾರತ, ಪ್ರಥಮ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಉಪಗ್ರಹ ರವಾನಿಸಿದ ಜಗತ್ತಿನ ಏಕೈಕ ರಾಷ್ಟ್ರ ಎನ್ನುವ ಹಿರಿಮೆಗೆ ಪಾತ್ರವಾಗಿತ್ತು. ಭಾರತದ ಈ ಭವ್ಯ ಸಾಧನೆಗೆ ಕಾರಣವಾದ ಇಸ್ರೋ ವಿಜ್ಞಾನಿಗಳಲ್ಲಿ ನಮ್ಮ ಕರುನಾಡಿನ ಹೆಮ್ಮೆಯ ಮಗಳು ರೂಪಾ ಎಂ.ವಿ ಸಹ ಒಬ್ಬರು.
ಕಲ್ಪವೃಕ್ಷ ನಾಡಿನ ಈ ಅಕ್ಷರ ಕ್ಷೇತ್ರದಲ್ಲಿ, ನಿತ್ಯ ಬೆಳಗ್ಗೆ 5ಗಂಟೆಗೆ ಮಂತ್ರಘೋಷ ಮೊಳಗುತ್ತೆ. ಪುಣ್ಯ ಪ್ರಾರ್ಥನೆ ಬಳಿಕ ಒಂದೇ ಪಂಕ್ತಿಯಲ್ಲಿ 1,000 ಮಕ್ಕಳು ತಿಂಡಿ, ಊಟ ಸೇವಿಸುತ್ತಾರೆ. ಈ ದಿವ್ಯ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಇಷ್ಟೊಂದು ಮಕ್ಕಳಿಗೆ ಅಕ್ಷರ, ಅನ್ನ ಮತ್ತು ಆಸರೆ ನೀಡಿ ಅಮ್ಮನಂತೆ ಪೊರೆಯುತ್ತಿರುವ ಈ ಧರ್ಮ ಕ್ಷೇತ್ರ, ಜಗತ್ತಿನಲ್ಲಿ ಸಿದ್ಧಗಂಗಾ ಮಠ ಅಂತಲೇ ಪ್ರಸಿದ್ಧಿ.
ಸುಮಾರು 250 ಕ್ಕಿಂತ ಹೆಚ್ಚು ಭತ್ತದ ತಳಿಗಳನ್ನು ಕಾಪಾಡಿ ಸಂಶೋಧನೆ ಮಾಡಿ ಮುಂದಿನ ಪೀಳಿಗೆಗೆ ನೀಡಿದ ಅಪರೂಪದ ಕೃಷಿಕ ಬೋರೇಗೌಡ. ಮಂಡ್ಯದ ಮಳವಳ್ಳಿ ಮೂಲದ ರೈತ, ಬೋರೆ ಗೌಡರ ಸಂಶೋಧನೆಗೆ ಹಲವಾರು ಕೃಷಿ ವಿಶ್ವವಿದ್ಯಾಲಯಗಳೂ ಸಹ ತಲೆಬಾಗಿ ಅವರನ್ನು ಗೌರವಿಸಿವೆ.
2020 ರಲ್ಲಿ ಟೋಕಿಯೋದಲ್ಲಿ ನಡೆದ ಪ್ಯಾರಾ ಒಲಂಪಿಕ್ನಲ್ಲಿ Badminton Men's Singel's ನಲ್ಲಿ ಬೆಳ್ಳಿ ಪದಕ ವಿಜೇತರು. 2007 ರಲ್ಲಿ IAS ನಲ್ಲಿ ಪಾಸ್ ಆಗಿ ಸದ್ಯಕ್ಕೆ ಉತ್ತರ ಪ್ರದೇಶದ ಗೌತಮ ಬುದ್ದ ನಗರದಲ್ಲಿ District Magistrate ಆಗಿ ಸೇವೆ ಸಲ್ಲಿಸುತ್ತಿದ್ದಾರೆ
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ನಂಬಿಗಸ್ಥ ಮತ್ತು ಬಲಗೈ ಎಂದೇ ಬಿಂಬಿತವಾಗುತ್ತಿದ್ದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪನವರು ಇಳಿದ ಮೇಲೆ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ. ಜನತಾ ಪರಿವಾರದ ಗರಡಿಯಲ್ಲಿ ಪಳಗಿ ತುಂಬಾ ದೂರ ಬಂದಿರುವ ಬೊಮ್ಮಾಯಿ ಅವರಿಗೆ, ಕರ್ನಾಟಕದ ಬಗ್ಗೆ ಅವರದೇ ಆದ ಕನಸಿದೆ. ಕರ್ನಾಟಕವನ್ನು ಮುನ್ನಡೆಸುವ ಜವಾಬ್ದಾರಿ ಜೊತೆಗೆ ಅದನ್ನು ನನಸು ಮಾಡುವ ದೊಡ್ಡ ಸವಾಲು ಕೂಡ ಅವರ ಮುಂದಿದೆ.
ಮೂರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಇರುವ ಜ್ಞಾನೇಂದ್ರ, ಸರಳ, ಸಜ್ಜನ ಹಾಗೂ ನಿರುಪದ್ರವಿ ರಾಜಕಾರಣಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಮಲೆನಾಡಿನಿಂದ ಬಂದಿರುವ ಜ್ಞಾನೇಂದ್ರ ಮೊದಲ ಬಾರಿಗೆ ಮಂತ್ರಿ ಆಗಿದ್ದಾರೆ. ಅದೂ ಕೂಡ ಅತ್ಯಂತ ಕಠಿಣ ಖಾತೆ ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.
ಬೆಂಗಳೂರು ನಗರದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಮಲ್ಲೇಶ್ವರವನ್ನು ಪ್ರತಿನಿಧಿಸುವ ಡಾ. ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲೇಬೇಕೆಂಬ ಪಣ ತೊಟ್ಟು ಆ ಕುರಿತು ದಣಿವರಿಯದೇ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ಕಾಲಿಟ್ಟ ಸಂದರ್ಭದಿಂದ ಕರ್ನಾಟಕದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ನಿಭಾಯಿಸುತ್ತಿರುವ ಡಾ. ಸುಧಾಕರ್ ಅವರಿಗೆ ಒಂದು ಸವಾಲಿನ ನಂತರ ಮತ್ತೊಂದು ಸವಾಲು ಬರುತ್ತಲೇ ಇದೆ. ಹೀಗೆ ಬರುವ ಎಲ್ಲ ಸವಾಲನ್ನು ಅವರು ಎದುರಿಸಲು ಸಿದ್ಧರಾಗಿದ್ದಾರೆ.
ಯಾವುದೇ ಪಕ್ಷದಲ್ಲಿರಲಿ, ರಾಜಕೀಯದ ಪಟ್ಟು ಹಾಕುವಲ್ಲಿ ಮುನಿರತ್ನ ಎತ್ತಿದ ಕೈ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಗೆದ್ದು ಈಗ, ಬೊಸವರಾಜ ಬೊಮ್ಮಾಯಿ ಸರಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದಾರೆ ಮುನಿರತ್ನ. ವಹಿಸಿಕೊಂಡ ಖಾತೆಯಲ್ಲಿ ಕೆಲಸ ಮಾಡಿ ತೋರಿಸುವ ಸವಾಲು ಅವರ ಮುಂದಿದೆ.
ದೇವೇ ಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದುದು ಬರೀ 18 ತಿಂಗಳು ಮತ್ತು ಭಾರತದ ಪ್ರಧಾನಿಯಾಗಿದ್ದುದು 11 ತಿಂಗಳು. ಆದರೆ, ಕರ್ನಾಟಕದ ಅಭಿವೃದ್ಧಿ ಬಗೆಗಿನ ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸಲಾರರು. ಅದರಲ್ಲಿಯೂ ದಕ್ಷಿಣ ಕರ್ನಾಟಕದ ನೀರಾವರಿ ಯೋಜನೆ ಮತ್ತು ಕೃಷಿ ರಂಗದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ.
ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಅನೇಕ ಪ್ರಮುಖ ತೀರ್ಪು ನೀಡಿರುವ ನ್ಯಾ. ಹೆಗ್ಡೆ ಅವರು ಕರ್ನಾಟಕದ ಲೋಕಾಯುಕ್ತರಾಗಿ ಜನಪರವಾಗಿ ಕೆಲಸ ಮಾಡಿದ್ದಾರೆ ಮತ್ತು ಅನೇಕ ಚಳುವಳಿಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ಕಾರಣಕ್ಕೆ ನ್ಯಾ. ಹೆಗ್ಡೆ ಅವರ ಹೆಸರು ಕರ್ನಾಟಕದ ಮೂಲೆ ಮೂಲೆಯಲ್ಲಿ ಜನಜನಿತವಾಗಿದೆ.
ಸರಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯನ್ನು ಬೆಳೆಸಿ ಲಕ್ಷಾಂತರ ಜನರ ಜೀವ ಉಳಿಸಿದ ಕೀರ್ತಿ ಡಾ. ಮಂಜುನಾಥ್ ಅವರದ್ದು. ಆತ್ಮೀಯತೆ, ಪ್ರೀತಿ, ರೋಗಿಗಳಿಗೆ ನೆರವು -ಹೀಗೆ ಡಾ. ಮಂಜುನಾಥ್ ಅವರು ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ನಿಜವಾದ ಉದಾಹರಣೆಯಾಗಿದ್ದಾರೆ.
ಇವರನ್ನು ಕನ್ನಡ ಸಿನಿಮಾ ಪ್ರಿಯರು, ಕರೆಯುವುದು ಹ್ಯಾಟ್ರಿಕ್ ಹೀರೋ ಅಂತ. ಎಂಬತ್ತರ ದಶಕದಲ್ಲಿ ಆನಂದ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಬಂದ ಶಿವಣ್ಣ, ಅನೇಕ ಜಾನರ್ನ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದಿಗೂ ಶಿವರಾಜ್ ಕುಮಾರ್ ಅವರ ಸಿನಿಮಾ ಶತದಿನ ಓಡುತ್ತೆ, ಜನರನ್ನು ರಂಜಿಸುತ್ತೆ. ತಮ್ಮ ನಟನೆಯ ಜೊತೆಗೆ ಅವರು ಸಮಾಜ ಸೇವೆಯಲ್ಲಿ ಕೂಡ ತೊಡಗಿಕೊಂಡಿದ್ದಾರೆ.
ಒಂದು ಸಮಯ ಇತ್ತು, ಇಡೀ ಕರ್ನಾಟಕದ ಯುವ ಜನಾಂಗ ರವಿಚಂದ್ರನ್ ಅವರನ್ನು ಕ್ರೇಜಿಯಾಗಿ ಅನುಕರಿಸುತ್ತಿತ್ತು. ಇದಕ್ಕೆ ಕಾರಣ, ರವಿಚಂದ್ರನ್ ಅಭಿನಯದ ಪ್ರೇಮಲೋಕ ಸಿನಿಮಾ. ತಂದೆ ವೀರಾಸ್ವಾಮಿ, ಸ್ಯಾಂಡಲ್ವುಡ್ನಲ್ಲಿ ಬಹು ದೊಡ್ಡ ಹೆಸರು. ಆದರೆ, ರವಿಚಂದ್ರನ್ ತಮ್ಮ ಪ್ರಯೋಗಶೀಲತೆ, ಹೊಸತನದ ಮೂಲಕ ಸ್ಯಾಂಡಲ್ವುಡ್ಗೆ ಹೊಸ ಟಚ್ ಕೊಟ್ಟರು. ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿ ಅವರು ಹೆಸರು ಮಾಡಿದ್ದಾರೆ.
ರಘು ದೀಕ್ಷಿತ್ ಅಂದ ತಕ್ಷಣ ನಮ್ಮ ಮನಸ್ಸು ಮನನ ಮಾಡುವುದು, “ನಿನ್ನ ಪೂಜೆಗೆ ಬಂದ ಮಾದೇಶ್ವರ..”ಹಾಡು. ತಮ್ಮ ಗಾಯನದ ಮೂಲಕ ಕನ್ನಡ ಮಾತ್ರ ಅಲ್ಲ ಇಡೀ ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ರಘು ದೀಕ್ಷಿತ್ ಹೊಸ ತಲೆಮಾರಿನ ಇಂಡಿಪಾಪ್ ಹಾಡುಗಾರರು. ತಮ್ಮದೇ ತಂಡ, The Raghu Dixit Project ಮೂಲಕ ಸಿನಿಮಾ ಮತ್ತು ಜಾನಪದ ಸಂಗೀತವನ್ನು ಕನ್ನಡಿಗರ ಮನೆ ಮನೆಗೆ ತಲುಪಿಸುತ್ತಿದ್ದಾರೆ.
ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದು ಸಿನಿಮಾ ಹಿನ್ನೆಲೆ ಸಂಗೀತ ಮತ್ತು ಅಲ್ಬಂ ಗೀತೆಗಳ ಮೂಲಕ ಇಡೀ ಜಗತ್ತಿನ್ನು ತಟ್ಟಿದ ಸಂಗೀತ ನಿರ್ದೇಶಕ, ಚರಣ್ರಾಜ್. ಕರ್ನಾಟಕ ಸಂಗೀತದಲ್ಲಿ ಅಭ್ಯಾಸ ನಡೆಸಿರುವ ರಾಜ್ ಅವರು ಲಂಡನ್ನಿನ ಸಂಗೀತ ಶಾಲೆಯಲ್ಲಿ ಪಿಯಾನೋ ವಾದನದಲ್ಲಿ ಎಂಟನೇ ಗ್ರೇಡ್ ಪಡೆದಿದ್ದಾರೆ. 2014 ರಲ್ಲಿ ಹರಿವು ಸಿನಿಮಾ ಮೂಲಕ ಕನ್ನಡ ಸಿನಿಮಾ ಜಗತ್ತಿಗೆ ಕಾಲಿಟ್ಟ ರಾಜ್ ಅವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮುಂತಾದ ಅನೇಕ ಸಿನಿಮಾಕ್ಕೆ ಸಂಗೀತ ನೀಡಿ ಕನ್ನಡಿಗರ ಮನ ಗೆದ್ದಿದ್ದಾರೆ.
Visit us: TV9 Karnataka Pvt ltd
13/1 Rhenius street, Richmond town, Bangalore, 560025
Call us: 080-40312700 / 702
Email Id: response@tv9.com